ರಾಮರಾಯ -
ವಸ್ತುತಃ ವಿಜಯನಗರ ಸಾಮ್ರಜ್ಯದ ಆಡಳಿತ ಸೂತ್ರಗಳನ್ನು ಪೂರ್ಣ ವಹಿಸಿಕೊಂಡಿದ್ದ ಮಹಾಮಂಡಲೇಶ್ವರ (ರಾಜ್ಯಾಧೀಕಾರತ್ವ 1543-65) ಸಾಮ್ರಾಟ ಕೃಷ್ಣದೇವರಯನ ಅಳಿಯ. ಇವನಿಗೆ ಕೋದಂಡರಾಮ ಎಂಬ ಹೆಸರೂ ಇದ್ದಿತೆಂದು ತಿಳಿದುಬರುತ್ತದೆ.
	
ಇವನು ಪ್ರಾರಂಭದಲ್ಲಿ ಗೋಲ್ಕಂಡದ ಸೈನ್ಯದಲ್ಲಿದ್ದನೆಂದು ಕೆಲವೊಂದು ಮೂಲಗಳಿಂದ ತಿಳಿದುಬರುತ್ತದೆ. ಅಲ್ಲಿಂದ ಬಂದ ಕೃಷ್ಣದೇವರಾಯನ ಬಳಿ ಸೇವೆಗೆ ಸೇರಿಕೊಂಡು ದಕ್ಷ ದಂಡನಾಯಕನೆನಿಸಿದ. ಕೆಲಕಾಲ ತೆಲುಗು ಪ್ರದೇಶಗಳಲ್ಲಿ ರಾಜಪ್ರತಿನಿಧಿಯಾಗಿಯೂ ಇದ್ದ.

  	ರಾಮರಾಯನ ಶಕ್ತಿಸಾಹಸಗಳಿಗೆ ಮೆಚ್ಚಿದ ಕೃಷ್ಣದೇವರಾಯ ತನ್ನ ಮಗಳು ತಿರುಮಲಾಂಬೆಯನ್ನು ಇವನಿಗೆ ಕೊಟ್ಟು ವಿವಾಹಮಾಡಿದ. ಇದರಿಂದ ಇವನು ಮುಂದೆ ಅಳಿಯ ರಾಮರಾಯನೆಂದೇ ಪ್ರಸಿದ್ಧನಾದ. ಕೃಷ್ಣದೇವರಾಯನ ಕಾಲದಲ್ಲಿ (1509-29) ರಾಮರಾಯ ಆಡಳಿತದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲೊಬ್ಬನಾಗಿದ್ದ. ಕೃಷ್ಣದೇವರಯನ ಮಗ ತಿರುಮಲರಾಯ ವಿಷಪ್ರಾಶನದಿಂದ ಮರಣಹೊಂದಿದಾಗ ಕೃಷ್ಣದೇವರಾಯನ ಮಲತಮ್ಮ ಅಚ್ಯುತರಾಯನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ. ಆದರೆ ಮುಂದೆ ಇವರಿಬ್ಬರಲ್ಲೂ ವಿರಸ ಉಂಟಾಯಿತು. ಅಚ್ಯುತರಾಯ ರಾಜನಾಗಿರುವುದನ್ನು ಸಹಿಸದ ಕೃಷ್ಣದೇವರಾಯನ ಚಿಕ್ಕಮಗುವನ್ನು ಉತ್ತರಾಧಿಕಾರಿಯೆಂದು ಘೋಷಿಸಿಬೇಕೆಂದು ಹವಣಿಸುತ್ತಿದ್ದ. ಆದರೆ ಅಷ್ಟರಲ್ಲೇ ಆ ಮಗುವೂ ತೀರಿಕೊಂಡಿದ್ದರಿಂದ ನಿರಾಶನಾದರೂ ರಾಮರಾಯ ತನ್ನ ರಾಜಕೀಯ ಶಕ್ತಿಸಂವರ್ಧನೆಯಲ್ಲಿ ತೊಡಗಿದ.

  	1524 ರಲ್ಲಿ ಅಚ್ಯುತ್ತರಾಯ ನಿಧನನಾದಾಗ ಅವನ ಮಗ ವೆಂಕಟ ಉತ್ತರಾಧಿಕಾರಿಯಾಗಿ ಬಂದ. ಇನ್ನೂ ಬಾಲಕನಾಗಿದ್ದ ಅವನ ಪರವಾಗಿ ಅವನ ಸೋದರಮಾವ ಸಕಲ ತಿರುಮಲ ರಾಜಪ್ರತಿನಿಧಿಯಾಗಿ ಆಡಳಿತ ಸೂತ್ರವನ್ನು ಬಿಡುಗಡೆ ಮಾಡಿ ಅವನೇ ರಾಜನೆಂದು ಘೋಷಿಸಿದ. ಈ ಸ್ಪರ್ಧೆಯಲ್ಲಿ ತಿರುಮಲ ಮತ್ತು ರಾಮರಾಯ ನಡುವೆ ಅನೇಕ ಯುದ್ಧಗಳು ನಡೆದವು. ಕೊನೆಗೆ ತಿರುಮಲ ರಾಮರಾಯನಿಂದ ಸಂಪೂರ್ಣವಾಗಿ ಸೋತು ಕೊಲೆಗೀಡಾದ.

  	1543 ರಲ್ಲಿ ರಾಮರಾಯ ಸದಾಶಿವ ಪಟ್ಟಾಭಿಷೇಕ ಮಾಡಿಸಿದ. ಆದರೆ ಅಧಿಕಾರವೆಲ್ಲ ರಾಮರಾಯನ ಕೈಸೇರಿತು. ರಾಜಬಿರುದುಗಳನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡ. 1550 ರ ವರೆಗೂ ರಾಮರಾಯ ರಾಜಪ್ರತಿನಿಧಿಯೆಂದು ಆಳ್ವಿಕೆ ನಡೆಸಿದ. ಪ್ರಬುದ್ಧ ವಯಸ್ಸಿಗೆ ಬಂದ ರಾಜ ಸ್ವತಂತ್ರ ಪ್ರವೃತ್ತಿಯನ್ನು ತೋರಿಸತೊಡಗಿದಾಗ ರಾಮರಾಯ ಅವನನ್ನು ಬಂಧನದಲ್ಲಿಟ್ಟು 1551 ರಿಂದ ತಾನೇ ಅಧಿಕಾರ ಚಲಾಯಿಸತೊಡಗಿದ. ಆದರೆ ಪ್ರಭುವನ್ನು ಸುರಕ್ಷಿತವಾಗಿಟ್ಟಿದ್ದ. ವರ್ಷಕ್ಕೊಮ್ಮೆ ರಾಮರಾಯನ ಸಹೋದರರು ರಾಜನ ಬಳಿ ಹೋಗಿ ಗೌರವ ಸೂಚಿಸುತ್ತಿದ್ದರು.

  	ರಾಮರಾಯ ರಾಜ್ಯಸೂತ್ರಗಳನ್ನು ವಹಿಸಿಕೊಂಡ ಕೂಡಲೇ ತನ್ನ ಸಹೋದರರಾದ ತಿರುಮಲ ಮತ್ತು ವೆಂಕಟಾದ್ರಿಯನ್ನು ಅನುಕ್ರಮವಾಗಿ ಮಂತ್ರಿ ಮತ್ತು ಸೇನಾಧಿಪತಿಯಾಗಿ ನೇಮಿಸಿದ. ಅನೇಕ ಹಳೆಯ ಆಸ್ಥಾನಿಕರನ್ನು ತೆಗೆದು ಅವರ ಸ್ಥಾನದಲ್ಲಿ ತನ್ನ ರಕ್ತಸಂಬಂಧಿಗಳನ್ನು ತಂದ. ವಿವಿಧ ಪ್ರಾಂತ್ಯಗಳಲ್ಲೂ ತನ್ನವರನ್ನು ಪ್ರತಿನಿಧಿಗಳನ್ನಾಗಿ ನೇಮಿಸಿದ. ಮುಸ್ಲಿಮರಿಗೆ ಉನ್ನತ ಸ್ಥಾನಗಳನ್ನು ಕೊಟ್ಟು ಸೈನ್ಯದಲ್ಲಿ ಹೆಚ್ಚುಹೆಚ್ಚಾಗಿ ಸೇರಿಕೊಂಡ. ಈ ಮೇಲಿನ ಎರಡೂ ಕಾರ್ಯಗಳು ಆಂತರಿಕ ಅಸಮಾಧಾನ ಮತ್ತು ಪ್ರತಿಭಟನಾ ಪ್ರವೃತ್ತಿಗೆ ಇಂಬುಗೊಟ್ಟವು. ಸಾಮ್ರಾಜ್ಯದ ಆಡಳಿತದ ನೈತಿಕಬಲ ಕುಸಿಯಿತು. ಸಾಮ್ರಾಜ್ಯದಾದ್ಯಂತ ಅಶಾಂತಿ ಮತ್ತು ದಂಗೆಗಳು ಪ್ರಾರಂಭವಾದವು. ದಕ್ಷಿಣದ ಸಾಮಂತರರನ್ನು ಅಡಗಿಸಬೇಕಾಯಿತು. ಆ ದಂಡಯಾತ್ರೆಯ ನೇತೃತ್ವ ವಹಿಸಿದ್ದ ವಿಟ್ಠಲ ಮತ್ತು ಚಿನ್ನಮ್ಮ ಇವರು ಚಂದ್ರಗಿರಿ, ಭುವನಗಿರಿಗಳನ್ನು ವಶಪಡಿಸಿಕೊಂಡರು. ತಂಜಾವೂರು ಮತ್ತು ಪುದುಕೋಟೆಯ ನಾಯಕರು ಶರಣಾದರು. ಪದಚ್ಯುತನಾಗಿದ್ದ ಪಾಂಡ್ಯವನ್ನು ಪ್ರತಿಸ್ಥಾಪಿಸಿದರು. ತಿರುವಾಂಕೂರಿನ ಪಂಚತಿರುವಡಿಗಳ ಸೈನ್ಯವನ್ನು ಎದುರಿಸಿ ಸೋಲಿಸಿದರು. ಚಿನ್ನತಿಮ್ಮ ಕನ್ಯಾಕುಮಾರಿನಲ್ಲಿ ವಿಜಯ ಸ್ತಂಭವನ್ನು ನೆಟ್ಟ. ವಿಟ್ಠಲ ದಕ್ಷಿಣ ಮಹಾಮಂಡಲೇಶ್ವರನಾಗಿ ನಿಯೋಜಿತನಾದ. ಈ ನಿಗ್ರಹಕಾರ್ಯವನ್ನು ಉತ್ತರದ ಮುದ್ಗಲ್‍ವರೆಗೂ ನಡೆಸಿದ. ಕರಾವಳಿಯಲ್ಲಿ ಕೀಟಲೆ ಕೊಡುತ್ತಿದ್ದ ಪೋರ್ಚುಗೀಸರನ್ನು ರಾಮರಾಯ ಅಡಗಿಸಿದ (1557-58). ಇದಲ್ಲದೆ ಸಿಲೋನಿನಲ್ಲಿ ಕ್ಯಾಂಡಿಯ ರಾಜನನ್ನು ಶರಣಾಗುವಂತೆ ಮಾಡಿದ.

   	ಹಿಂದೆ ಕೃಷ್ಣದೇವರಾಯನ ಪ್ರತಾಪದಿಂದ ನೊಂದಿದ್ದ ದಖನ್ನಿನ ಶಾಹೀ ರಾಜ್ಯಗಳು ಒಳಗೊಳಗೇ ವಿಜಯನಗರದ ಮೇಲೆ ಕುದಿಯುತ್ತಿದ್ದವು. ಆದರೆ ವಿಜಯನಗರದಂಥ ಬಲಾಢ್ಯ ಸಾಮ್ರಾಜ್ಯದ ಎದುರು ಅವು ದುರ್ಬಲಾಗಿದ್ದವು. ಅವುಗಳ ಪರಸ್ಪರದ್ವೇಷ, ಸಂಶಯಗಳಿಗೊಳಗಾಗಿ ಆಗಾಗ ಒಂದಿಲ್ಲೊಂದು ರಾಜ್ಯಗಳು ವಿಜಯನಗರದೊಂದಿಗೆ ಮೈತ್ರಿ ಬೆಳೆಸಿದ್ದುವು. ರಾಮರಾಯ ಹಿಂದೆ ಗೋಲ್ಕಂಡದ ಸೇವೆಯಲ್ಲಿದ್ದುದ್ದರಿಂದ ಇವನಿಗೆ ಈ ಮುಸ್ಲಿಂ ರಾಜ್ಯಗಳ ಆಂತರಿಕ ಸಂಬಂಧಗಳ ಸ್ವರೂಪವೂ ಚೆನ್ನಾಗಿ ತಿಳಿದಿತ್ತು. ಸಂದರ್ಭಕ್ಕೆ ಅನುಗುಣವಾಗಿ ಇವನು ಅವರಲ್ಲಿ ಕೆಲವರಿಗೆ ಸಹಾಯಹಸ್ತ ಚಾಚುತ್ತ ಭೇಧನೀತಿಯನ್ನು ಅನುಸರಿಸಿದ್ದ. ಶಾಹೀ ರಾಜ್ಯಗಳ ಪ್ರದೇಶದಲ್ಲಿ 1542 ರ ವರೆಗೂ ನಿರಂತರವಾಗಿ ಯುದ್ಧಗಳ ಸರಣಿ ಮುಂದುವರಿಯಿತು. 1542 ರಲ್ಲಿ ಬಿಜಾಪುರದ ಇಬ್ರಾಹಿಂ ಆದಿಲ್ ಷಾ ವಿಜಯನಗರದ ಮೇಲೆ ಬಿದ್ದರೂ ಹೆಚ್ಚಿನ ಪರಿಣಾಮವಾಗಲಿಲ್ಲ. ಮುಂದೆ ವಿಜಯನಗರ 1557ರ ವರೆಗೂ ಅಹಮದ್ ನಗರದ ಪರ ವಹಿಸಿತು. 1543 ರಲ್ಲಿ ರಾಮರಾಯ ಬಿಜಾಪುರದಿಂದ ರಾಯಚೂರು ಮತ್ತು ಕೃಷ್ಣ-ತುಂಗಭದ್ರಾ ಮಧ್ಯವರ್ತಿ ಪ್ರದೇಶಗಳನ್ನು ವಹಿಸಿಕೊಂಡ. ಸೊಲ್ಲಾಪುರ ಅಹಮದ್ ನಗರಕ್ಕೆ ದಕ್ಕಿತು. ಅಹಮದ್ ನಗರದವರು ಕಲ್ಯಾಣವನ್ನು ಬಿದರೆಯವರಿಂದ ಕಿತ್ತುಕೊಂಡರು (1551). ಹೀಗೆ ರಾಯಚೂರು, ಮದ್ಗಲ್, ಕಲ್ಯಾಣ ಮತ್ತು ಸೊಲ್ಲಾಪುರಗಳಿಗಾಗಿ ಆಗಾಗ ಪೈಪೋಟಿ ನಡೆಯುತ್ತಿದ್ದ ಸಂದರ್ಭದಲ್ಲಿ ರಾಮರಾಯ ತನ್ನ ನೀತಿಯನ್ನು ಬದಲಿಸಿದ (1557). ಬಿಜಾಪುರದೊಂದಿಗೆ ಸ್ನೇಹ ಬೆಳೆಸಿದ. ರಾಮರಾಯನ ನೆರವಿನಿಂದ ಅಲಿ ಆದಿಲ್ ಷಾ ಅಹಮದ್ ನಗರಕ್ಕೆ ಅಪಾರ ನಷ್ಟವನ್ನುಂಟುಮಾಡಿದ (16558-59). 1563ರ ಯುದ್ಧದಲ್ಲೂ ಅಹಮದ್ ನಗರ ಅಪಮಾನಕರ ಸೋಲನ್ನು ಅನುಭವಿಸ ಬೇಕಾಯಿತು.

  	1564ರ ಹೊತ್ತಿಗೆ ದಖನ್ನಿನ ರಾಜಕೀಯ ಸ್ಥಿತಿ ಅತಿಗೊಂದಲಮಯವಾಗಿದ್ದಿತು. ವಿಜಯನಗರ ದಕ್ಷಿಣದಲ್ಲಿ ಅತಿಪ್ರಬಲವಾಗಿ ಕಾಣಿಸಿಕೊಂಡರೆ, ಉತ್ತರದಲ್ಲಿ ಶಾಹೀ ಸುಲ್ತಾನರು ಪರಸ್ಪರ ಹೋರಾಡಿ ಕಣ್ಣಾಗಿದ್ದರು. ವಿಜಯನಗರವನ್ನು ಒಂದಲ್ಲ ಒಂದು ರಾಜ್ಯ ಅವಲಂಬಿಸಿರುವುದು ಅನಿವಾರ್ಯವಾಗಿತ್ತು. ಮುಸ್ಲಿಂ ರಾಜ್ಯಗಳು ಈ ಪರಿಸ್ಥಿತಿಯನ್ನು ಅರಿತುಕೊಳ್ಳುವಲ್ಲಿ ವಿಫಲವಾಗಲಿಲ್ಲ. ಅವು ಪರಸ್ಪರ ಮಾತುಕತೆ ನಡೆಸಿ ತಮ್ಮ ಐಕ್ಯಮತದ ಅಗತ್ಯವನ್ನು ಮನಗಂಡವು; ಇದರ ಪರಿಣಾಮವಾಗಿ ಅವರೊಳಗೆ ವಿವಾಹಸಂಬಂಧಗಳು ಜರುಗಿದವು. ವಿಜಯನಗರವನ್ನು ನಾಶ ಮಾಡುವ ಏಕೈಕ ಗುರಿಯಿಂದ ಭಾವೈಕ್ಯವನ್ನು ಸಾಧಿಸಲಾಯಿತು.

  	ಈ ಸುಲ್ತಾನರ ನಾಲ್ಕು ರಾಜ್ಯಗಳು ಒಂದಾಗಿ ಬಿಜಾಪುರ ಬಳಿ ತಮ್ಮ ಸೈನ್ಯವನ್ನು ಜಮಾಯಿಸಿದವು. 1564 ಡಿಸೆಂಬರ್ 25 ರಂದು ಈ ಸಂಯುಕ್ತ ಸೈನ್ಯದಲ್ಲಿ ದಂಡಯಾತ್ರೆ ದಕ್ಷಿಣದತ್ತ ಹೊರಟಿತು. ಇತ್ತ ರಾಮರಾಯ ಮುಂದಾಗಿ ಈ ಅಪಾಯವನ್ನರಿತಿದ್ದ. ಆಗ ಎಂಬತ್ತು ವರ್ಷದವನಾಗಿದ್ದ ಇವನು ಬೃಹತ್ ಸೈನ್ಯದೊಂದಿಗೆ ಸ್ವತಃ ರಣರಂಗಕ್ಕೆ ಹೊರಟ. ಇವನ ಸೋದರರಾದ ವೆಂಕಟಾದ್ರಿ ಮತ್ತು ತಿರುಮಲರೂ ಮುಂದಾಗಿಯೇ ಹೋಗಿದ್ದರು. ಒಂದು ತಿಂಗಳಕಾಲ ಉಭಯ ಸೈನ್ಯಗಳೂ ಪರಸ್ಪರ ಶಕ್ತಿಪರೀಕ್ಷೆ ಮತ್ತು ವ್ಯೂಹ ರಚನೆಯಲ್ಲಿ ತೊಡಗಿದವು. ಯುದ್ಧದ ಪ್ರಮುಖ ಘಟನೆ ಕೃಷ್ಣಾನದಿಯ ಬಳಿಯ ರಕ್ಕಸತಂಗಡಿ (ನೋಡಿ- ರಕ್ಕಸ-ತಂಗಡಿ) ಎಂಬಲ್ಲಿ ನಡೆಯಿತೆಂದು ಗುರುತಿಸಲಾಗಿದೆ. 1565 ಜನವರಿ 23 ರಂದು ನಡೆದ ಭೀಕರ ಕದನದಲ್ಲಿ ರಾಮರಾಯ ಮೃತನಾದ. ವಿಜಯನಗರ ಸೈನ್ಯ ಕಂಗಾಲಾಗಿ ಸೋತು ಓಡಿತು.

  	ರಾಮರಾಯನ ಸೋಲು ಮತ್ತು ಸಾವಿನಿಂದಾಗಿ ವಿಜಯನಗರ ಸಾಮ್ರಾಜ್ಯ ಮಸುಕಾಯಿತು. ಅಲ್ಲಿಂದ ಮುಂದೆ ಹಲವು ದಶಕಗಳ ಕಾಲ ವಿಜಯನಗರ ರಾಜವಂಶ ಮುಂದುವರಿದರೂ ಹಿಂದಿನ ವೈಭವ ಕೂಡಿಬರಲಿಲ್ಲ. ಈ ಐತಿಹಾಸಿಕ ದುರಂತಕ್ಕೆ ರಾಮರಾಯ ಬಹಳಷ್ಟು ಮಟ್ಟಿಗೆ ಕಾರಣನೆಂಬುದು ಹಲವು ಇತಿಹಾಸಕಾರರ ಅಭಿಪ್ರಾಯ. ರಾಮರಾಯ ಅಪ್ರತಿಮವೀರ, ರಣಭಯಂಕರ, ನೂರು ಸಮರಗಳ ವೀರ. ಆದರೆ ಇವನು ದಖನ್ನಿನ ರಾಜಕೀಯದಲ್ಲಿ ದೊಡ್ಡಣ್ಣನ ಪಾತ್ರವಹಿಸಿದುದು ಉಳಿದವರಿಗೆ ಅಸಹನೀಯವಾಯಿತು. ಸುಲ್ತಾನರ ಒಳಜಗಳದಲ್ಲಿ ಇವನ ಮಧ್ಯಪ್ರವೇಶ ಅತಿಯಾದರೂ ಒಂದು ರೀತಿಯಲ್ಲಿ ತಪ್ಪು ಲೆಕ್ಕಾಚಾರ ಆಯಿತು. ರಾಮರಾಯನ ಸಮಯಸಾಧಕ ನೀತಿ ಮತ್ತು ಪರಿಸ್ಥಿತಿಗಳು ಇವನಿಗೆ ಎರವಾದವು.

  	ವಿಜಯನಗರ ಸಾಮ್ರಾಜ್ಯದ ಸಂಸ್ಕøತಿ ಪ್ರೋತ್ಸಾಹ ನೀತಿಯನ್ನು ರಾಮರಾಯನೂ ಮುಂದುವರಿಸಿದ. ಇವನ ಆಸ್ಥಾನದಲ್ಲಿ ತೆಲಗು ಕವಿ ಭಟ್ಟುಮೂರ್ತಿ ಇದ್ದ. ವ್ಯಾಸರಾಯ, ಪುರಂದರದಾಸ, ಕನಕದಾಸ ಇವನ ಸಮಕಾಲೀನರು. ಮಹಾದೇವಿಯಕ್ಕನ ಪುರಾಣದ ಕರ್ತೃ ಬಸವೇಂದ್ರ, ಚೋಳರಾಜ ಸಾಂಗತ್ಯದ ಕರ್ತೃ ಲಿಂಗ ಮುಂತಾದ ವೀರಶೈವ ಕವಿಗಳು ಪ್ರಸಿದ್ಧರಾಗಿದ್ದರು. ಭಾರತ, ರತ್ನಾಕರ, ವೈದ್ಯಸಾಂಗತ್ಯ ಮೊದಲಾದುವನ್ನು ರಚಿಸಿದ ಸಾಳ್ವ ಮತ್ತು ಚಂದ್ರಪ್ರಭ ಚರಿತೆಯನ್ನು ರಚಿಸಿದ ದೊಡ್ಡಯ್ಯ ಈ ಕಾಲದ ಜೈನಕವಿಗಳಲ್ಲಿ ಮುಖ್ಯರು. ರಾಮರಾಯ ಧಾರ್ಮಿಕ ಕಾರ್ಯಗಳಿಗೆ ದಾನ, ದತ್ತಿಗಳನ್ನು ಕೊಟ್ಟಿದ್ದಾನೆ. ಇವನು ಶ್ರೀವೈಷ್ಣವಪಂಥದ ಪರಮ ಪೋಷಕನಾಗಿದ್ದ. ಮಾಧ್ವ ವಿಜಯೇಂದ್ರ ತೀರ್ಥ ವಿದ್ವತ್ತು, ತತ್ತ್ವಜ್ಞಾನಗಳನ್ನು ಗೌರವಿಸಿ ಹಲವಾರು ಹಳ್ಳಿಗಳನ್ನು ಅವರಿಗೆ ಉಂಬಳಿ ನೀಡಿದ್ದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ